Saturday, February 11, 2012

ಪಕ್ಷಪಾತ



ನನ್ನೆದೆಗೆ ಒರಗಿ ಅವಳು 
ಮೈ ಮರೆತು ಮಲಗಿರಲು 
ಚಾಮರವ ಬೀಸಿತ್ತು 
ಕೇಳಬಾರದೆಂದು
ಪಿಸುಗುಟ್ಟಿದಾಗಲೂ
ಕದ್ದು ಕೇಳಿತ್ತು ;
ಎದುರಾದರೂ ಇಂದು 
ಒಂದು ಮಾತಿಲ್ಲ 
ನೆಪಕ್ಕಾದರೂ ಒಮ್ಮೆ ಬೀಸಲಿಲ್ಲ
ಗಾಳಿಯಲ್ಲೂ ಭೇದವಿದೆ .


ನಡೆವಾಗ ಜೊತೆಜೊತೆಯಲಿ 
ಒಂದೆ ಕೊಡೆಯ ಅಡಿಯಲಿ  
ಬಿಡದೆ ಸುರಿದಿತ್ತು 
ನೆನೆಯಬಾರದೆಂದು ,
ಅಪ್ಪಿ ನಡೆದಾಗಲೂ 
ತೋಯಿಸಿ ಛೇಡಿಸಿತ್ತು; 
ಗೋಗೆರದರೂ ಇಂದು 
ಸೋನೆ ಸುಳಿವಿಲ್ಲ 
ಹೃದಯ ಕುಲುಮೆ  ತಣಿಸಲಿಲ್ಲ 
ಮಳೆಯಲ್ಲೂ  ಪಕ್ಷಪಾತವಿದೆ!

Friday, February 10, 2012

ಕೋರಿಕೆ...


ನಿನಗಾಗಿ ಬದುಕನ್ನೇ 
ಬಲಿ ಕೊಟ್ಟಾಗಿದೆ 
ಕೊನೆಪಕ್ಷ  ಇರಲಿ ಬಿಡು 
ಹಾಳೆ ನಡುವಿನ ನವಿಲುಗರಿ
ನಲುಗಿದ ಜೀವಕೆ ನೆನಪಾಗಿ  
ಸೋತ ಮನಕೆ ಸಾಂತ್ವನವಾಗಿ 


ನಿನಗಾಗಿ  ನಗುವೇ..
 ಮರೆತಾಗಿದೆ 
ಕೊನೆಪಕ್ಷ  ಇರಲಿ ಬಿಡು 
ನೋವಾದರೂ ...
ದಿನ ನೂಕುವುದಕ್ಕೆ ಕಾರಣವಾಗಿ 
ಉಸಿರಾಡುವುದಕ್ಕೆ ಸಾಕ್ಷಿಯಾಗಿ 



ನಿನಗಾಗಿ ಗುಲಾಬಿ ಗೊಂಚಲೇ 
ಕೊಟ್ಟಾಗಿದೆ 
ಕೊನೆಪಕ್ಷ  ಇರಲಿ ಬಿಡು 
ಜೊತೆಗಿದ್ದ ಮುಳ್ಳು 
ನಮ್ಮ ಪ್ರೇಮದ ಬಳುವಳಿಯಾಗಿ 
ನಿನ್ನ ವಂಚನೆಯ ಸಾಕ್ಷಿಯಾಗಿ ..


ಮಾತಂತೂ ...
ಎಂದೂ ಮುಗಿದು ಹೋಗಿದೆ 
ಕೊನೆಪಕ್ಷ  ಇರಲಿ ಬಿಡು 
ಕವಿತೆಯಾದರೂ ..
ಹತಾಶೆಯ  ಚಡಪಡಿಕೆಯಾಗಿ  
ಭಗ್ನ  ಪ್ರೇಮಿಯ ಕನವರಿಕೆಯಾಗಿ 

Friday, February 3, 2012

ವ್ಯತ್ಯಾಸ



ಹೆಣದ ಮೇಲೆ ಬಿದ್ದ ಹಣ 
ಎಸೆದವನಿಗೆ ' ಸಂಪ್ರದಾಯ '  
ಆಯ್ದವನಿಗೆ  ಆ  ದಿನದ  'ಆದಾಯ '

ವಿಚಿತ್ರ



ಕದ್ದ ಮಾಲು ಕಳೆದದಕ್ಕೆ 
ಕಳ್ಳರಿಬ್ಬರು ಹುಡುಕಿ ಹುಡುಕಿ 
ಹತಾಶರಾಗಿದ್ದರು .
ಕಳೆದುಕೊಂಡವನು 
ಮೈಮರೆತು ,
ಹಾಯಾಗಿ ಮಲಗಿದ್ದ .

ಹಿಂಬಾಗಿಲು !



ಹೀಗೆ ಬಂದವಳು 
ಹಾಗೆ ಹೋದಳು 
ಪ್ರೇಮ ಸೌಧಕ್ಕೂ ,
ಎರಡು ಬಾಗಿಲುಗಳಿರುತ್ತವೆ  !!!

ವಿಸ್ಮಯ!!



ಇರಬಹುದು  ನಿನಗೆ,
ನಾನು ಬಡಬಡಿಸುವ  ತಿರುಕ 
ಆಕಸ್ಮಿಕವಾಗಿ ಸಿಕ್ಕ ದಾರಿಹೋಕ
ಆದರೆ ಮತ್ಯಾರಿಗೋ,
ಈ ಹೃದಯವೇ ತಂಗುದಾಣ 
ಅವರಪಾಲಿಗೆ ನಾನು ,
ಕೊನೆಯ ನಿಲ್ದಾಣ !

ಒಲ್ಲೆ ಎಂದು ಒಗೆದ ಕಲ್ಲು 
ಶಿಲೆಯಾಗುವುದೇ  ಅಲ್ಲವೇ 
ಜಗದ ವಿಸ್ಮಯ !!!