Saturday, February 11, 2012

ಪಕ್ಷಪಾತ



ನನ್ನೆದೆಗೆ ಒರಗಿ ಅವಳು 
ಮೈ ಮರೆತು ಮಲಗಿರಲು 
ಚಾಮರವ ಬೀಸಿತ್ತು 
ಕೇಳಬಾರದೆಂದು
ಪಿಸುಗುಟ್ಟಿದಾಗಲೂ
ಕದ್ದು ಕೇಳಿತ್ತು ;
ಎದುರಾದರೂ ಇಂದು 
ಒಂದು ಮಾತಿಲ್ಲ 
ನೆಪಕ್ಕಾದರೂ ಒಮ್ಮೆ ಬೀಸಲಿಲ್ಲ
ಗಾಳಿಯಲ್ಲೂ ಭೇದವಿದೆ .


ನಡೆವಾಗ ಜೊತೆಜೊತೆಯಲಿ 
ಒಂದೆ ಕೊಡೆಯ ಅಡಿಯಲಿ  
ಬಿಡದೆ ಸುರಿದಿತ್ತು 
ನೆನೆಯಬಾರದೆಂದು ,
ಅಪ್ಪಿ ನಡೆದಾಗಲೂ 
ತೋಯಿಸಿ ಛೇಡಿಸಿತ್ತು; 
ಗೋಗೆರದರೂ ಇಂದು 
ಸೋನೆ ಸುಳಿವಿಲ್ಲ 
ಹೃದಯ ಕುಲುಮೆ  ತಣಿಸಲಿಲ್ಲ 
ಮಳೆಯಲ್ಲೂ  ಪಕ್ಷಪಾತವಿದೆ!

Friday, February 10, 2012

ಕೋರಿಕೆ...


ನಿನಗಾಗಿ ಬದುಕನ್ನೇ 
ಬಲಿ ಕೊಟ್ಟಾಗಿದೆ 
ಕೊನೆಪಕ್ಷ  ಇರಲಿ ಬಿಡು 
ಹಾಳೆ ನಡುವಿನ ನವಿಲುಗರಿ
ನಲುಗಿದ ಜೀವಕೆ ನೆನಪಾಗಿ  
ಸೋತ ಮನಕೆ ಸಾಂತ್ವನವಾಗಿ 


ನಿನಗಾಗಿ  ನಗುವೇ..
 ಮರೆತಾಗಿದೆ 
ಕೊನೆಪಕ್ಷ  ಇರಲಿ ಬಿಡು 
ನೋವಾದರೂ ...
ದಿನ ನೂಕುವುದಕ್ಕೆ ಕಾರಣವಾಗಿ 
ಉಸಿರಾಡುವುದಕ್ಕೆ ಸಾಕ್ಷಿಯಾಗಿ 



ನಿನಗಾಗಿ ಗುಲಾಬಿ ಗೊಂಚಲೇ 
ಕೊಟ್ಟಾಗಿದೆ 
ಕೊನೆಪಕ್ಷ  ಇರಲಿ ಬಿಡು 
ಜೊತೆಗಿದ್ದ ಮುಳ್ಳು 
ನಮ್ಮ ಪ್ರೇಮದ ಬಳುವಳಿಯಾಗಿ 
ನಿನ್ನ ವಂಚನೆಯ ಸಾಕ್ಷಿಯಾಗಿ ..


ಮಾತಂತೂ ...
ಎಂದೂ ಮುಗಿದು ಹೋಗಿದೆ 
ಕೊನೆಪಕ್ಷ  ಇರಲಿ ಬಿಡು 
ಕವಿತೆಯಾದರೂ ..
ಹತಾಶೆಯ  ಚಡಪಡಿಕೆಯಾಗಿ  
ಭಗ್ನ  ಪ್ರೇಮಿಯ ಕನವರಿಕೆಯಾಗಿ 

Friday, February 3, 2012

ವ್ಯತ್ಯಾಸ



ಹೆಣದ ಮೇಲೆ ಬಿದ್ದ ಹಣ 
ಎಸೆದವನಿಗೆ ' ಸಂಪ್ರದಾಯ '  
ಆಯ್ದವನಿಗೆ  ಆ  ದಿನದ  'ಆದಾಯ '

ವಿಚಿತ್ರ



ಕದ್ದ ಮಾಲು ಕಳೆದದಕ್ಕೆ 
ಕಳ್ಳರಿಬ್ಬರು ಹುಡುಕಿ ಹುಡುಕಿ 
ಹತಾಶರಾಗಿದ್ದರು .
ಕಳೆದುಕೊಂಡವನು 
ಮೈಮರೆತು ,
ಹಾಯಾಗಿ ಮಲಗಿದ್ದ .

ಹಿಂಬಾಗಿಲು !



ಹೀಗೆ ಬಂದವಳು 
ಹಾಗೆ ಹೋದಳು 
ಪ್ರೇಮ ಸೌಧಕ್ಕೂ ,
ಎರಡು ಬಾಗಿಲುಗಳಿರುತ್ತವೆ  !!!

ವಿಸ್ಮಯ!!



ಇರಬಹುದು  ನಿನಗೆ,
ನಾನು ಬಡಬಡಿಸುವ  ತಿರುಕ 
ಆಕಸ್ಮಿಕವಾಗಿ ಸಿಕ್ಕ ದಾರಿಹೋಕ
ಆದರೆ ಮತ್ಯಾರಿಗೋ,
ಈ ಹೃದಯವೇ ತಂಗುದಾಣ 
ಅವರಪಾಲಿಗೆ ನಾನು ,
ಕೊನೆಯ ನಿಲ್ದಾಣ !

ಒಲ್ಲೆ ಎಂದು ಒಗೆದ ಕಲ್ಲು 
ಶಿಲೆಯಾಗುವುದೇ  ಅಲ್ಲವೇ 
ಜಗದ ವಿಸ್ಮಯ !!!

Tuesday, January 31, 2012

ಪರ್ಯಾಯ !



ನೀನು ಬಿಟ್ಟು ಹೋದ ಕ್ಷಣದಿಂದ 
ಹುಡುಕುತ್ತಿರುವುದು ನಾನು 
'ನಿನ್ನನ್ನೇ '

ಅಚಾನಕ್ಕಾಗಿ    ಸಿಕ್ಕಳು 
'ಅವಳು'
ಕೋಟಿ ಮುತ್ತಿಗೂ ತೃಪ್ತಳಾಗದ
ಹತಾಶ ,ತಪ್ತ ಶರಧಿ !!
ತುಟಿಯಲ್ಲಿ ತೀರದ  ಅಮಲು !
ಮುಡಿಯಲ್ಲಿ ಅದೇ ಘಮಲು !
ನಗುವಲ್ಲಿ ಥೇಟ್  ನಿನ್ನದೇ ಮುಗುಳು !
ಆದರೆ
ಸತಾಯಿಸಿ ತವಕ ಹುಟ್ಟಿಸಲಿಲ್ಲ ,
ತೆಕ್ಕೆಯಿಂದ ನುಣುಚಿಕೊಂಡು
ಓಡಲಿಲ್ಲ,
ನಿನ್ನಂತೆ ಕಾಡಲಿಲ್ಲ, 
ಕಾಯಿಸಲಿಲ್ಲ .

ಕಳೆದದ್ದನ್ನ ಹುಡುಕೇ ತೀರುವ 
ಜಾಯಮಾನ!
ಅಂತು ಸಿಕ್ಕಳು, 
ನಿನ್ನದೇ ಬೊಗಸೆ ಕಂಗಳ ಹುಡುಗಿ !
ಕಾಸಗಲ ತಾವಿನಲ್ಲಿ ಜಗದಗಲ ಕನಸು 
ಆದರೆ ಕನಸಿನಲ್ಲಿ ನಾನಿರಲಿಲ್ಲ .
ಗಲ್ಲವೂ ತಂಬಿಟ್ಟಿನಂತೆ 
ಥೇಟ್ ನಿನ್ನಂತೆ !
ಆದರೆ ಛೇಡಿಸುವ ಕರಿಮಚ್ಚೆ 
ಕಾಣಲಿಲ್ಲ .
ಒಂದಿಚು  ಮೇಕಪ್  ಇಲ್ಲದೆ 
ಎಂದು ನನ್ನೆದುರು  ಬರಲಿಲ್ಲ .

.............................

ಖುದ್ದು ನಿನ್ನ ವರ್ತನೆಯಲ್ಲೇ 
ಪರಿ'ವರ್ತನೆ '
ಪ್ರೀತಿ ಮಾತ್ರವಿದ್ದ ಹೃದಯದಿ
ಇಂದು ಧಾರ್ಷ್ಯವಿದೆ .
ನಿನ್ನಲ್ಲೂ ಅವಳು ಉಳಿದಿಲ್ಲ 
ನನ್ನದು ಮತ್ತದೇ ಮರಳಿ ಯತ್ನ 
ದಕ್ಕುವವರೆಗೆ ,
ಗಾಯಕೊಂದು ಪರ್ಯಾಯ ,
ನೀರಿಕ್ಷೆಗೊಂದು ಉತ್ತರ ,
ನೋವಿಗೊಂದು ಸಾಂತ್ವನ !
'ಬದಲಾವಣೆ  ಜಗದ ನಿಯಮ'
"ಬದ್ದತೆ ಪ್ರೇಮಿಯ ಉಮೇದು "

Monday, January 23, 2012

ಹಾಜರಿ !!



ಇಷ್ಟು ದೊಡ್ಡ ಊರಿನಲ್ಲಿ 
ಅದೊಂದು  ಬೀದಿ ಬೆಳಗಿದೆ,
ಬೆಳಕಿನಬ್ಬ ನಡೆದಿದೆ 
ನೀನು.. ಬಂದು ಹೋದೆಯಾ? 


ಬತ್ತಿ ಹೋದ ಹೂಳೆಯು, ಇಂದು
ಭೂರ್ಗೆರೆದು ಹರಿದಿದೆ
ಸಾಲು ದಿಬ್ಬಣ ಹೊರಟಿದೆ 
ನೀನು ಮಿಂದು ಹೋದೆಯಾ?


ಒಂಟಿ ಮರದ ಕೊಂಬೆ ಮೇಲೆ
ದುಂಬಿ ಸಂತೆ ನೆರೆದಿದೆ 
ಜೇನಕೂಟ  ನೆಡದಿದೆ
ನೀನು ಭೇಟಿಯಾದೆಯ ?

ಕೋಟಿ ತಾರೆ ನಡುವಿನಲ್ಲಿ
ಅದೊಂದು ತಾರೆ ಹೊಳೆದಿದೆ 
ವಜ್ರದಂತೆ ಮಿನುಗಿದೆ 
ನೀನು.. ಕಣ್ಣು ಹೊಡೆದೆಯ ?

ಇಷ್ಟು ಬರೆದ ಮೇಲೂ ,
ಇನ್ನೂ  ಏನೂ ಉಳಿದಿದೆ 
ಶಾಯಿ ಮುಗಿದು ಹೋಗಿದೆ 
ಇಂದು ನೀನು .. ಸಿಗುವೆಯ ?