ನಿನಗಾಗಿ ಬದುಕನ್ನೇ
ಬಲಿ ಕೊಟ್ಟಾಗಿದೆ
ಕೊನೆಪಕ್ಷ ಇರಲಿ ಬಿಡು
ಹಾಳೆ ನಡುವಿನ ನವಿಲುಗರಿ
ನಲುಗಿದ ಜೀವಕೆ ನೆನಪಾಗಿ
ಸೋತ ಮನಕೆ ಸಾಂತ್ವನವಾಗಿ
ನಿನಗಾಗಿ ನಗುವೇ..
ಮರೆತಾಗಿದೆ
ಕೊನೆಪಕ್ಷ ಇರಲಿ ಬಿಡು
ನೋವಾದರೂ ...
ದಿನ ನೂಕುವುದಕ್ಕೆ ಕಾರಣವಾಗಿ
ಉಸಿರಾಡುವುದಕ್ಕೆ ಸಾಕ್ಷಿಯಾಗಿ
ನಿನಗಾಗಿ ಗುಲಾಬಿ ಗೊಂಚಲೇ
ಕೊಟ್ಟಾಗಿದೆ
ಕೊನೆಪಕ್ಷ ಇರಲಿ ಬಿಡು
ಜೊತೆಗಿದ್ದ ಮುಳ್ಳು
ನಮ್ಮ ಪ್ರೇಮದ ಬಳುವಳಿಯಾಗಿ
ನಿನ್ನ ವಂಚನೆಯ ಸಾಕ್ಷಿಯಾಗಿ ..
ಮಾತಂತೂ ...
ಎಂದೂ ಮುಗಿದು ಹೋಗಿದೆ
ಕೊನೆಪಕ್ಷ ಇರಲಿ ಬಿಡು
ಕವಿತೆಯಾದರೂ ..
ಹತಾಶೆಯ ಚಡಪಡಿಕೆಯಾಗಿ
ಭಗ್ನ ಪ್ರೇಮಿಯ ಕನವರಿಕೆಯಾಗಿ
No comments:
Post a Comment