ನನ್ನೆದೆಗೆ ಒರಗಿ ಅವಳು
ಮೈ ಮರೆತು ಮಲಗಿರಲು
ಚಾಮರವ ಬೀಸಿತ್ತು
ಕೇಳಬಾರದೆಂದು
ಪಿಸುಗುಟ್ಟಿದಾಗಲೂ
ಕದ್ದು ಕೇಳಿತ್ತು ;
ಎದುರಾದರೂ ಇಂದು
ಒಂದು ಮಾತಿಲ್ಲ
ನೆಪಕ್ಕಾದರೂ ಒಮ್ಮೆ ಬೀಸಲಿಲ್ಲ
ಗಾಳಿಯಲ್ಲೂ ಭೇದವಿದೆ .
ನಡೆವಾಗ ಜೊತೆಜೊತೆಯಲಿ
ಒಂದೆ ಕೊಡೆಯ ಅಡಿಯಲಿ
ಬಿಡದೆ ಸುರಿದಿತ್ತು
ನೆನೆಯಬಾರದೆಂದು ,
ಅಪ್ಪಿ ನಡೆದಾಗಲೂ
ತೋಯಿಸಿ ಛೇಡಿಸಿತ್ತು;
ಗೋಗೆರದರೂ ಇಂದು
ಸೋನೆ ಸುಳಿವಿಲ್ಲ
ಹೃದಯ ಕುಲುಮೆ ತಣಿಸಲಿಲ್ಲ
ಮಳೆಯಲ್ಲೂ ಪಕ್ಷಪಾತವಿದೆ!
No comments:
Post a Comment